Saturday, 19 April 2025

'ಕೂದಲು ತೆಳ್ಳಗಾಗುತ್ತಿದೆಯೇ?? ನೈಸರ್ಗಿಕವಾಗಿ ದಪ್ಪ ಹಾಗೂ ಆರೋಗ್ಯವಾಗಿ ಬೆಳೆಯಬೇಕೆ?? ಹಾಗಾದರೆ ಇವತ್ತೇ ಇದನ್ನು ಮಾಡಿ!!"


"ಕೂದಲು ಸೊಂಪಾಗಿ ಬೆಳೆಯಲು ನೈಸರ್ಗಿಕ ಮಾರ್ಗವನ್ನು ಅನುಸರಿಸಿ"





"ಇತ್ತೀಚೆಗೆ ಹೆಣ್ಣು–ಗಂಡು, ಯುವಕರಿಂದ ಪ್ರೌಢವಯಸ್ಕರವರೆಗೂ ಬಹುಮಂದಿ “ನನ್ನ ಕೂದಲು ಹೆಚ್ಚಾಗಿ ಉದುರುತ್ತ ಇದೆ”, “ತಲೆ ಬಾಣಲಿ ಆಗುತ್ತಿದೆ” ಎಂದು ಚಿಂತೆಗೆ ಒಳಗಾಗುತ್ತಾರೆ. ಎಷ್ಟೋ ಮನೆಮದ್ದುಗಳು, ಎಣ್ಣೆ ಮತ್ತು ವೈದ್ಯರ ಸಲಹೆ ತೆಗೆದುಕೊಳ್ಳುತ್ತಾರೆ. ಸಾಕಷ್ಟು ಬಾರಿ ಸಮಸ್ಯೆ ಗಂಭೀರ ಆಗುತ್ತಿರುವಾಗ ನಾವು ಬೇರೆ ಕಡೆ ಗಮನ ಕೊಡುತ್ತೇವೆ, ಆಹಾರದಲ್ಲಿನ ಸತ್ವಗಳತ್ತ ಗಮನ ಹರಿಸುವುದಿಲ್ಲ. "ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆದರಂತೆ" ಹಾಗೆ ಆಯ್ತು ನಮ್ಮ ಜೀವನ ಅಲ್ಲವೇ??!!" 

ನಾವು ತಿನ್ನುವ ಆಹಾರವೇ ನಮಗೆ ಔಷಧ ಆಗಬೇಕೆ ವಿನಃ, ಮೆಡಿಕಲ್ ಶಾಪ್ ನಲ್ಲಿ ಸಿಗುವ ಔಷಧ ನಮ್ಮ ಆಹಾರವಾಗಿ ಬದಲಾವಣೆ ಆಗದೆ ಇದ್ದರೆ ಸಾಕು !!!"

ಕೂದಲು ಕಳೆದುಕೊಳ್ಳುವುದಕ್ಕೆ ಹಲವು ಕಾರಣಗಳಿವೆ – ಮಾನಸಿಕ ಒತ್ತಡ, ಹಾರ್ಮೋನು ಬದಲಾವಣೆ, ಪರಿಸರದ ದುಷ್ಪ್ರಭಾವ, ರೋಗ ಮತ್ತು ಮಿಗಿಲಾಗಿ, ಆಹಾರದ ಕೊರತೆ. ಈ ಲೇಖನದಲ್ಲಿ ನಾವು ಆಹಾರದ ಪೋಷಕತತ್ವಗಳ ಬಗ್ಗೆ ತಿಳಿದುಕೊಳ್ಳೋಣ – ಯಾವ ಯಾವ ಆಹಾರಗಳನ್ನು ತಿನ್ನಬೇಕು, ಯಾವುದನ್ನು ತಪ್ಪಿಸಬೇಕು, ಹೇಗೆ ಸರಿಯಾದ ಆಹಾರ ಮೂಲಕ ಕೂದಲನ್ನು ಆರೋಗ್ಯವಾಗಿ ದಟ್ಟವಾಗಿ ಬೆಳೆಸಬಹುದು ಎಂಬುದರ ಬಗ್ಗೆ ..

1. ಕೂದಲಿಗೆ ಬೇಕಾಗಿರುವ ಮುಖ್ಯವಾದ ಪೋಷಕಾಂಶಗಳು

ಪ್ರೋಟೀನ್:

ಕೂದಲು 'ಕೆರಾಟಿನ್' ಎಂಬ ಪ್ರೋಟೀನ್‌ನಿಂದ ತಯಾರಾಗುತ್ತದೆ. ಆದ್ದರಿಂದ ಪ್ರೋಟೀನ್ ಆಹಾರ ಮುಖ್ಯ. ಮೊಟ್ಟೆ, ಮೀನು, ಚಿಕನ್, ತೊಗರಿಬೇಳೆ, ಕಡಲೆಬೇಳೆ, ಹುರಳಿ ಕಾಳು, ಬಾದಾಮಿ ಮುಂತಾದವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು.

ಕಬ್ಬಿಣ ಸತ್ವ (Iron):

ಇದು ರಕ್ತದಲ್ಲಿ ಹೇಮೋಗ್ಲೋಬಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಹೇಮೋಗ್ಲೋಬಿನ್ ಕೂದಲಿನ ಬೇರುಗಳಿಗೆ ಆಮ್ಲಜನಕ ಒದಗಿಸುತ್ತದೆ. ಮೆಂತ್ಯೆಸೊಪ್ಪು, ದಪ್ಪ ಸೊಪ್ಪುಗಳು, ಬೆಳ್ಳುಳ್ಳಿ, ದಾಳಿಂಬೆ, ಖರ್ಜೂರ – ಈ ಆಹಾರಗಳಲ್ಲಿ ಕಬ್ಬಿಣದ ಸತ್ವ ಹೆಚ್ಚು ಇದೆ.

ವಿಟಮಿನ್ C:

ಇದು ಕಬ್ಬಿಣದ ಸತ್ವವನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ ಮತ್ತು ಕೂದಲನ್ನು ನವೀಕರಿಸಲು ಅಗತ್ಯವಿದೆ. ನಾರಿಂಜ ಹಣ್ಣು, ಸೇಬು, ನೆಲ್ಲಿಕಾಯಿ, ಸ್ಟ್ರಾಬೆರಿ ಮುಂತಾದ ಹಣ್ಣುಗಳನ್ನು ಸೇವನೆ ಮಾಡಬೇಕು.

ವಿಟಮಿನ್ A:

ಇದು ತ್ವಚೆಯಲ್ಲಿನ ತೈಲ ಗ್ರಂಥಿಗಳನ್ನು ಸಕ್ರಿಯಗೊಳಿಸಿ ಕೂದಲಿಗೆ ತೇವಾಂಶ ನೀಡುತ್ತದೆ. ಕ್ಯಾರೆಟ್, ಸೀಮೆ ಬದನೆ, ಬೂದುಕುಂಬಳಕಾಯಿ, ಹಸಿರು ಸೊಪ್ಪುಗಳಲ್ಲಿ ಕಂಡುಬರುತ್ತದೆ.

ವಿಟಮಿನ್ E:

ಇದು ತ್ವಚೆ ಮತ್ತು ಕೂದಲಿಗೆ ರಕ್ತ ಹರಿವನ್ನು ಸುಧಾರಿಸುತ್ತದೆ. ಬಾದಾಮಿ, ಸೂರ್ಯಕಾಂತಿ ಬೀಜ, ಮೊಳಕೆ ಕಾಳುಗಳ ಸೇವನೆ ಮಾಡಬಹುದು.

ಬಯೋಟಿನ್ (Vitamin B7):

ಇದು ಕೂದಲಿನ ಬೆಳವಣಿಗೆಗೆ ಪ್ರಮುಖವಾಗಿದೆ. ಬಯೋಟಿನ್ ಕೊರತೆಯಿಂದ ಕೂದಲು ಒಣಗಿ ಹೋಗುತ್ತದೆ. ಬೀನ್ಸ್, ಮೊಟ್ಟೆ, ಗೋಧಿ, ಮೊಳಕೆ ಹಾಕಿದ ಧಾನ್ಯಗಳಲ್ಲಿ ಬಯೋಟಿನ್ ಇರುತ್ತದೆ.

ಒಮೆಗಾ-3 ಕೊಬ್ಬು ಆಮ್ಲಗಳು:

ಇವು ಕೂದಲನ್ನು ಒಣಗದಂತೆ ತಡೆಯುತ್ತವೆ. ಮೀನು (ಸಾಲ್ಮನ್, ಸಾರ್ಡಿನ್), ಅಗಸೆ ಬೀಜ, ಚಿಯಾ ಬೀಜ, ವಾಲ್‌ನಟ್‌ನಲ್ಲಿ ಈ ಕೊಬ್ಬು ಆಮ್ಲಗಳು ಇವೆ.

ಜಿಂಕ್ ಮತ್ತು ಸೆಲೆನಿಯಂ:

ಇವು ಕೂದಲಿನ ಕಣಗಳನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತವೆ. ಬೀನ್ಸ್, ಬದನೇಕಾಯಿ, ಎಳ್ಳು, ಒಣಕಾಯಿಗಳಿಂದ ಲಭ್ಯ.

2. ದಿನಚರಿಯಲ್ಲಿ ತಿನ್ನಬಹುದಾದ ಕೂದಲು ಸ್ನೇಹಿ ಆಹಾರಗಳು

ಬೆಳಗ್ಗೆ ಉಪಾಹಾರ:

  • ಮೊಟ್ಟೆ ಅಥವಾ ಮೊಸರಿಂದ ಸಿದ್ಧಪಡಿಸಿದ ಬೆಳಗ್ಗಿನ ಉಪಹಾರ. 
  • ನೆಲ್ಲಿಕಾಯಿ ಅಥವಾ ಲಿಂಬೆಹಣ್ಣಿನ ಜ್ಯೂಸ್. 
  • ನೆನೆಸಿಟ್ಟ ಬಾದಾಮಿ, ವಾಲ್‌ನಟ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಮಧ್ಯಾಹ್ನ ಊಟ:

  • ಬೂದುಕುಂಬಳಕಾಯಿ ಪಲ್ಯ, ಸೊಪ್ಪಿನ ಸಾರು, ದಾಳಿಂಬೆ ಅಥವಾ ಸೇಬು.
  • ತೊಗರಿಬೇಳೆ ಸಾರು, ಮೊಸರು, ಭತ್ತ ಅಥವಾ ರಾಗಿ ಮುದ್ದೆ.

ಸಂಜೆ ಉಪಾಹಾರ:

  • ಓಟ್ಸ್ ಅಥವಾ ಮೊಳಕೆ ಬರಿಸಿದ ಕಡಲೆ.
  • ನೆಲ್ಲಿಕಾಯಿ ಅಥವಾ ಹಾಲಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

ರಾತ್ರಿ:

  • ಚಪಾತಿ/ರಾಗಿ ರೊಟ್ಟಿ ಜೊತೆಗೆ ತರಕಾರಿ ಪಲ್ಯ.
  • ಬಿಸಿಬೇಳೆಬಾತ್. ಇದರ ಜೊತೆ ಕೊತ್ತಂಬರಿ ಸೊಪ್ಪು ಬೆರೆಸಬೇಕು. ಸೊಪ್ಪಿನಿಂದ ಕಬ್ಬಿಣದ ಸತ್ವ ಸಿಗುತ್ತದೆ.

3. ನೀರಿನ ಪ್ರಾಮುಖ್ಯತೆ

ಅಸಹಜವಾಗಿ ಕೂದಲು ಒಣಗುವುದು, ಇದರ ಹಿಂದೆ ನೀರಿನ ಕೊರತೆಯೂ ಕಾರಣವಾಗಬಹುದು. ದಿನಕ್ಕೆ ಕನಿಷ್ಠ 8-10 ಗ್ಲಾಸು ನೀರು ಕುಡಿಯಬೇಕು. ಬಿಸಿಲಿನ ದಿನಗಳಲ್ಲಿ ಇದನ್ನು ಹೆಚ್ಚಿಸಬಹುದು. ತೇವಾಂಶ ಇರುವ ಹಣ್ಣುಗಳು – ಕಲ್ಲಂಗಡಿ, ದ್ರಾಕ್ಷಿ, ಪೇರಲೆ – ಸೇವನೆಯೂ ಸಹಾಯ ಮಾಡುತ್ತದೆ.


4. ತಪ್ಪಿಸಬೇಕಾದ ಆಹಾರಗಳು

  • ಹೆಚ್ಚಾದ ಸಕ್ಕರೆಯ ಪದಾರ್ಥಗಳು – ಪೇಸ್ಟ್ರಿ, ಮಿಠಾಯಿ, ಸಾಫ್ಟ್ ಡ್ರಿಂಕ್ಸ್.
  • ಕರಿದ ತಿಂಡಿಗಳು, ಹೆಚ್ಚು ಉಪ್ಪು ಇರುವ ಫಾಸ್ಟ್ ಫುಡ್.
  • ಅತಿಯಾಗಿ ಕಾಫಿ, ಚಹಾ ಸೇವನೆ,ನಿಕೋಟಿನ್, ಅಲ್ಕೊಹಾಲ್.

5. ಪೂರಕ ಆಹಾರ (supplements) ಬೇಕಾ?

ವೈದ್ಯರ ಸಲಹೆಯಿಂದ ಮಾತ್ರ ಪೂರಕ ಆಹಾರ ತೆಗೆದುಕೊಳ್ಳಬೇಕು. ಬಯೋಟಿನ್ ಟ್ಯಾಬ್ಲೆಟ್, ವಿಟಮಿನ್ D, ವಿಟಮಿನ್ B12 ಟ್ಯಾಬ್ಲೆಟ್‌ಗಳು ಸಹಾಯಕರಾಗಬಹುದು. ಆದರೆ ಇವು ಯಾವತ್ತೂ ಆಹಾರದ ಬದಲಿಗೆ ಅಲ್ಲ.

6. ಕೂದಲಿಗೆ ಆಹಾರ ಜೊತೆಗೆ ಆರೈಕೆಯೂ ಅಗತ್ಯ

  • ತಲೆ ತೇವವಿರುವಾಗ ಕೂದಲನ್ನು ಬಾಚಿ ಕಟ್ಟಬಾರದು.
  • ನೈಸರ್ಗಿಕ ಎಣ್ಣೆ – ಕೊಬ್ಬರಿ, ಬಾದಾಮಿ ಎಣ್ಣೆ ಬಳಸಿ.
  • ವಾರಕ್ಕೆ 2–3 ಬಾರಿ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ.
  • ಕೂದಲು ಎತ್ತರವಾಗಿ ಕಟ್ಟುವುದು, ತೀವ್ರ ಬಣ್ಣ ಬಳಸುವುದು ಕಡಿಮೆ ಮಾಡಬೇಕು.

7. ಯೋಗ ಮತ್ತು ವ್ಯಾಯಾಮ

ನಿತ್ಯವೂ ಶರೀರ ಚಲನೆಗೆ ಇಡಬೇಕು. ಯೋಗಾಸನಗಳಲ್ಲಿ ಶಿರಸಾಸನ, ವಜ್ರಾಸನ, ಬೃಂಗಾಸನ ಕೂದಲು ಬೆಳವಣಿಗೆಗೆ ಸಹಾಯಮಾಡುತ್ತವೆ. ರಕ್ತಸಂಚಾರ ಸುಧಾರಿಸಿದರೆ ಕೂದಲು ಬೇರಿನವರೆಗೂ ಪೋಷಣೆ ಸಿಗುತ್ತದೆ.

8. ಮನಸ್ಸಿನ ಸ್ಥಿತಿ – ಒತ್ತಡ ಮತ್ತು ನಿದ್ದೆ

ತೀವ್ರವಾದ ಒತ್ತಡ ಕೂದಲು ತೆಳ್ಳಗಾಗಲು ಮತ್ತು ಹೆಚ್ಚು ಉದುರಿ ಹೋಗಲು ಕಾರಣವಾಗಬಹುದು. ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ರೆಬೇಕು. ಧ್ಯಾನ, ಪ್ರಾಣಾಯಾಮದಿಂದ ಶಾಂತಿ ಸಿಗುತ್ತದೆ – ಇದು ಶರೀರ ಮತ್ತು ಕೂದಲಿಗೆ ಶ್ರೇಷ್ಠ.


ಅಂತಿಮವಾಗಿ:

"ತೆಳ್ಳಗಾಗುತ್ತಿರುವ ಕೂದಲಿನ ಸಮಸ್ಯೆಗೆ ತಕ್ಷಣದ ಪರಿಹಾರವಿಲ್ಲ. ಆದರೆ ನಿರಂತರವಾಗಿ ಸಮತೋಲನಪೂರ್ಣ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ, ಕೂದಲಿನ ಆರೈಕೆ ಇವನ್ನೆಲ್ಲಾ ಅನುಸರಿಸಿದರೆ ಕೆಲವು ತಿಂಗಳೊಳಗೆ ಬದಲಾವಣೆ ಕಾಣಬಹುದು. ನಿಮ್ಮ ಅಡಿಗೆಮನೆಯಲ್ಲಿ ಇವತ್ತೇ ಬದಲಾವಣೆ ಶುರುಮಾಡಿ!"

No comments:

Post a Comment

"Complete Guide to Electrolytes: Functions, Benefits and Daily Needs"

  Electrolytes are essential minerals that carry an electric charge. Found in blood, sweat, and urine, they play a crucial role in maintaini...